ಶುಕ್ರವಾರ, ನವೆಂಬರ್ 4, 2016

ಗೋವಿಂದರಾಜ ಬೈಚಗುಪ್ಪೆ... ಬರೆಯುತ್ತಾರೆ, "ಝೆನ್ ಗುರುವಿನಂತೆ ಬದುಕಿದ ಗೋನಾಳ್ ಸರ್"


ಝೆನ್ ಗುರು ಎಷುನ್ನಾ ಕುಳಿತಿದ್ದಾಳೆ. ಅವರಲ್ಲಿಗೆ ಒಬ್ಬ ಯುವಕ ಶಿಷ್ಯತ್ವ ಸ್ವೀಕರಿಸಲು ಬರುತ್ತಾನೆ. ಆಶ್ರಮದಲ್ಲಿ ಊಟ ಮಾಡಿ ಗುರುವಿನ ಬಳಿ ಬಂದು ತಾನು ಬಂದ ಉದ್ದೇಶವನ್ನು ಹೇಳಿ, ‘ತಾನು ಮಾಡಬೇಕಾದ ಕೆಲಸ ಏನು’ ಎಂದು ಕೇಳುತ್ತಾನೆ. ತಲೆ ಎತ್ತಿಯೂ ನೋಡದ ಎಷುನ್ನಾ ‘ಊಟ ಆಯಿತೇ’ ಎಂದು ಕೇಳುತ್ತಾಳೆ. ಯುವಕ ‘ಈಗ ತಾನೆ ಮಾಡಿದೆ’ ಎನ್ನುತ್ತಾನೆ. ಆಗ ಎಷುನ್ನಾ ‘ಹಾಗಾದರೆ ತಟ್ಟೆ ತೊಳೆದಿಡು’ ಎನ್ನುತ್ತಾಳೆ. ಇದು ಗೋನಾಳ್ ಸರ್ ಅವರ ಜೀವನ ದೃಷ್ಟಿಕೋನ,
40 ವರ್ಷಗಳ ಹಿಂದೆಯೇ ಎಂಎಸ್ ಸಿ ಮಾಡಿದ್ದ ಅವರು, ಸುಮಾರು 10ಕ್ಕೂ ಹೆಚ್ಚು ಭಾಷೆಗಳನ್ನು ಬಲ್ಲ ವಿಷಯ ಗ್ರಾಹಿಯಾಗಿದ್ದರು. ವಿಜ್ಞಾನ, ತತ್ವಜ್ಞಾನ, ಮ್ಯಾಜಿಕ್ ಇತ್ಯಾದಿ ಹತ್ತಾರು ವಿಷಯಗಳ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದರು. ಆದರೆ ಸಂಗೀತದ ಕರೆಗೆ ಒಲಿದು ಅದನ್ನೇ ಕೈ ಹಿಡಿದರು. ಹತ್ತು ಹಲವು ಸಿನಿಮಾಗಳಿಗೆ ಯಶಸ್ವಿ ಸಂಗೀತ ನೀಡಿ ಮುನ್ನೆಲೆಗೆ ಬರುತ್ತಲೇ ಬದುಕಿನಲ್ಲಿ ಘಟಿಸಿದ ಪ್ರೀತಿಯಿಂದ ವಂಚಿತರಾಗಿ, ಅದನ್ನು ಮರೆಯುವ ಸಲುವಾಗಿ ರಂಗಭೂಮಿ ಕಡೆಗೆ ಬಂದರು.
‘ ಅದೇ ಪ್ರೀತಿಯ ಕನಸನ್ನೇ ಮನದಲ್ಲಿ ಹೊತ್ತು ಮದುವೆಯನ್ನು ಶಾಶ್ವತವಾಗಿ ಮುಂದೂಡಿಬಿಟ್ಟರು. ಅತ್ಯಂತ ಶಿಸ್ತಿನ ಚಲನಶೀಲ ಮನಸ್ಸು, ಒಳಗೊಂದು, ಹೊರಗೊಂದಿಲ್ಲದ ಸ್ಪಷ್ಟ ಮಾತು. ಮುಖಸ್ತುತಿ, ಓಲೈಕೆ ಇಲ್ಲದ ನೇರ ಮಾತು. ಸರಳವಾದ ಸಾದಾ ಪ್ಯಾಂಟ್ ಶರ್ಟ್ ಕಣ್ಣಿಗೆ ಸುಂದರ ಚೌಕಟ್ಟು ನೀಡುವ ಕನ್ನಡಕ, ನೀಟಾಗಿ ಬಾಚಿದ ತಲೆಗೂದಲು, ಗದ್ದಲಗಳಿಂದ ದೂರವಾಗಿ ಸಿಗರೇಟು ಸೇದುತ್ತಾ ಯೋಚನಾ ಮಗ್ನ ನೋಟ.  
ಎರಡು ದಶಕ ಸಿನಿಮಾ ಸಂಗೀತ ಕ್ಷೇತ್ರದಲ್ಲೂ, ಎರಡು ದಶಕ ರಂಗಭೂಮಿಯಲ್ಲಿ ಸಂಗೀತ ನೀಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ ಇಸ್ಮಾಯಿಲ್ ಗೋನಾಳ್ ಅವರ ಸರಳ ವ್ಯಕ್ತಿತ್ವ ಇದು. ಜನಜಂಗುಳಿಯಿಂದ ದೂರ ಇರುತ್ತಿದ್ದ ಅವರದ್ದು ಮಗುವಿನಂಥಾ ಮನಸ್ಸು. ಅಪರಿಚಿತರು ವಿಳಾಸ ಕೇಳಿದರೂ ತುಂಬಾ ಆಸಕ್ತಿಯಿಂದ ಹತ್ತಾರು ದಾರಿ ಹೇಳುವಷ್ಟು ತಾಳ್ಮೆ ಅವರದ್ದು, ಉಡಾಫೆ ಮತ್ತು ನಿರ್ಲಕ್ಷ್ಯದ ಧೋರಣೆ, ಅಹಂಕಾರ, ಮತ್ಸರ ಇತ್ಯಾದಿಗಳು ಅವರಿಂದ ತುಂಬಾ ದೂರ.
ವಿನಯ ಮತ್ತು ನಾಚಿಕೆ ಕಲಾವಿದನಿಗೆ ಇರಬೇಕಾದ ಅತ್ಯಂತ ಅಗತ್ಯವಾದ ಸಾಂಸ್ಕೃತಿಕ ಆಸ್ತಿ. ಕಲಾವಿದನ ಸಾಂಸ್ಕೃತಿಕ ಅಸ್ಮಿತೆ ಇವು. ಆದರೆ, ಇಂದು ಕಲಾಕ್ಷೇತ್ರ ಹಾಗೂ ಸಂಸ್ಕೃತಿ ಇಲಾಖೆ ಸುತ್ತ ತುಂಬಿಕೊಂಡಿರುವ ಸಂಘಟಕರು ಹಾಗೂ ಕಲಾವಿದರಿಗೆ ಇವುಗಳ ಪರಿಚಯವೇ ಇಲ್ಲ. ಯಾರು ಸಾಯುತ್ತಾರೆ, ಯಾರಿಗೆ ಸನ್ಮಾನ ಮಾಡಬೇಕು ಇತ್ಯಾದಿ ಅನುದಾನದ ಫೈಲ್ ಸಿದ್ದಪಡಿಸುವುದನ್ನೇ ಸಂಸ್ಕೃತಿ, ಕಲಾ ಚಟುವಟಿಕೆ ಎಂದು ತಿಳಿದಿರುವ ಬುದ್ಧಿವಂತರು.
ಆರ್ಥಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಇಂದು ಕಲಾವಿದರಿಂದ ಕಾಣೆಯಾಗಿರುವ ಮಾತು ಮತ್ತು ಮೌನದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಗೋನಾಳ್ ಸರ್ ಎಂದೂ ಕಳೆದುಕೊಂಡಿರಲಿಲ್ಲ. ಇಸ್ಮಾಯಿಲ್ ಸಂಪದ್ಬರಿತ ಸಾಂಸ್ಕೃತಿಕ ಲಕ್ಷಣಗಳನ್ನು ಹೊಂದಿದ್ದ ಅತ್ಯಂತ ನಾಚಿಕೆ ಮತ್ತು ಮುಜುಗರ ತುಂಬಿದ ವಿನಯ ತುಂಬಿದ ವ್ಯಕ್ತಿ.
ಆಸ್ತಿಕರಾಗಿದ್ದ ಅವರು ಎಂದೂ ಪ್ರಾರ್ಥನೆಗೆಂದು ಮಸೀದೆಗೆ ಹೋದವರಲ್ಲ. ಹಾಗೆಂದು ಎಂದೂ ಪ್ರಾರ್ಥನೆ ಮರೆತವರಲ್ಲ. ಕರ್ಮಟ ಹಿಂದೂ –ಮುಸ್ಲಿಮರಿಗೆ ಇದು ಯೋಚಿಸಬೇಕಾದ ಸಂಗತಿ.
ಸಾರ್ ದೇವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದರೆ, ದೇವರ ಮೇಲಿನ ನಂಬಿಕೆ ಒಳ್ಳೆಯದು. ಪಂಚಭೂತಗಳು ಮನುಷ್ಯನನ್ನು ಪ್ರಭಾವಿಸುತ್ತವೆ. ದೇವರ ನಂಬಿಕೆ ಎಂಬುದೊಂದು ಇಲ್ಲದಿದ್ದಲ್ಲಿ ಜನರ ನಡುವೆ ನಂಬಿಕೆ ಇರುತ್ತಿರಲಿಲ್ಲ. ಸಾಮಾನ್ಯ ಮನುಷ್ಯರಿಗೆ ದೇವರು ಒಂದು ನೆಮ್ಮದಿಯ ಸಂಗತಿ ಎಂದು ದೇವರ ಅಗತ್ಯವನ್ನು ಒತ್ತಿ ಹೇಳುತ್ತಿದ್ದರು.
ಕೆಲ ನಿರ್ದೇಶಕರ ಮುಖವಾಡ ಹಾಕಿದ ಕೃತಕ ನಡವಳಿಕೆ ಹಾಗೂ ತಿರಸ್ಕಾರವನ್ನು ಕಂಡು ಅವರು, ನೋಡಿ ನಾನು ಮತ್ತೆ ಸಿನಿಮಾ ಕಡೆಗೆ ಸಂಗೀತ ನೀಡಲು ಹೋಗ್ತಿದ್ದೇನೆ. ಇವರಿಗೆ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ. ನಾನು ಕಡಿಮೆಯಲ್ಲ. ಇನ್ನು ಮುಂದೇನಿದ್ದರೂ ಸಿನಿಮಾ ಕ್ಷೇತ್ರವೇ ನನ್ನ ಕಾರ್ಯಕ್ಷೇತ್ರ ಎಂದು ಅಬ್ಬರಿಸುತ್ತಿದ್ದರು.
ತುಂಬಾ ಗಿಜಿಗುಡುವ ಜನ, ಅಬ್ಬರ, ಗಲಾಟೆಗಳಿಂದ ಅವರೆಂದೂ ದೂರ ಇರುತ್ತಿದ್ದರು. ಒಮ್ಮೆ ಒಂದು ಹಾಡಿಗೆ ಸಂಗೀತ ಸಂಯೋಜಿಸಿ ಅದನ್ನು ಹಾಡುಗಾರರಿಗೆ ತರಬೇತಿ ನೀಡಿದರೆ, ಇನ್ನು ಅರ್ಧ ಗಂಟೆ ಏಕಾಂತದಲ್ಲಿ ಟೀ ಕುಡಿಯುತ್ತ, ಬೆರಳಿಗೆ ಸಿಗರೇಟು ಸಿಗಿಸಿಕೊಂಡು ಆಕಾಶ ನೋಡುತ್ತಾ ಯೋಚನಾ ಮಗ್ನರಾಗಿರುತ್ತಿದ್ದರು.
ಎರಡು ದಶಕಗಳಿಗೂ ಹೆಚ್ಚು ಕಾಲ ಸುಮಾರು 200ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನೀಡಿ ರಂಗಭೂಮಿಯ ಆತ್ಮಸಾಕ್ಷಿಯನ್ನು ಹೆಚ್ಚಿಸಿದ್ದಾರೆ. ವ್ಯಾಪಾರದ ದೃಷ್ಟಿಯಿಂದ ಅವರೆಂದು ಸಂಗೀತವನ್ನು ನೋಡಲಿಲ್ಲ. ರೂಮಿಗೆ ಬಾಡಿಗೆ ಕಟ್ಟಲು ಕಷ್ಟವಿದ್ದಾಗಲೂ ಅವರೆಂದೂ ಹೇಳಿಕೊಳ್ಳುತ್ತಿರಲಿಲ್ಲ. ಇಷ್ಟೇ ಬೇಕು ಎಂದೂ ಅವರೆಂದೂ ಕೇಳಿದವರಲ್ಲ.ಎಷ್ಟೋ ಮಂದಿ ಸಂಗೀತ ಮಾಡಿಸಿಕೊಂಡು ಪುಡಿಗಾಸು ಕೊಟ್ಟಾಗಲೂ ಅವರು ಮರು ಮಾತನಾಡಿಲ್ಲ.
ಅವರಿಂದ ಹತ್ತಾರು ನಾಟಕ, ಜಾಥಾಗಳಿಗೆ ಸಂಗೀತ ಮಾಡಿಸಿಕೊಂಡು ಬೆಳೆದ ದೊಡ್ಡ ರಂಗ ನಿರ್ದೇಶಕರೊಬ್ಬರು ಲಕ್ಷಾಂತರ ರೂಪಾಯಿ ಬಜೆಟ್ಟಿನ ನಾಟಕ ಆಡಿಸಿದಾಗ ಗೋನಾಳ್ ಅವರಿಗೆ ಮಾತ್ರ ಅವಕಾಶ ನೀಡಲಿಲ್ಲ. ಸಿನಿಮಾದ ಪ್ರಸಿದ್ಧ ಸಂಗೀತ ಸಂಯೋಜಕರನ್ನು ಕರೆ ತಂದು ಲಕ್ಷಾಂತರ ರೂಪಾಯಿ ಹಣ ನೀಡಿದಾಗಲೂ ಗೋನಾಳ್ ಬೇಸರಗೊಳ್ಳಲಿಲ್ಲ. ಅಲ್ಲಿ, ಇಲ್ಲಿ ಸಂಗೀತ ನೀಡಿ ಬಂದ ಹಣದಿಂದ ಕಷ್ಟದಲ್ಲೂ ಇದೇ ನಿರ್ದೇಶಕರ ರೂಮಿಗೆ ಬಾಡಿಗೆಯನ್ನೂ ತಾವೇ ಕಟ್ಟುತ್ತಾ ಸರಿ ದೂಗಿಸುತ್ತಿದ್ದರು.
ಸುಖಾಸುಮ್ಮನೆ ಯಾರ ಬಗ್ಗೆಯೂ ಟೀಕೆ ಮಾಡುವ ಲಕ್ಷಣ ಅವದ್ದಾಗಿರಲಿಲ್ಲ. ಸಾಮಾನ್ಯವಾಗಿ ಅವರ ಶಿಶ್ಯರಾದ ನಾವು. ‘ ಆ ನಿರ್ದೇಶಕರು ನಿಮಗೇ ಹೀಗೆ ಮಾಡಿದರಲ್ಲ ಸಾರ್. ಇದು ಸರೀನಾ’ ಎಂದು ಪ್ರಶ್ನಿಸಿದರೆ ಗೋನಾಳ್, ‘ನೋಡಿ ಅವರು ವ್ಯವಹಾರ ಪ್ರಜ್ಞೆಯುಳ್ಳವರು, ಲಾಭ ನಷ್ಟದ ಲೆಕ್ಕಾಚಾರ ಬಲ್ಲವರು, ಅವರು ಸರಿಯಾಗೇ ಇದ್ದಾರೆ. ನಿಮ್ಮ ನಿರೀಕ್ಷೆಯೇ ತಪ್ಪು’ ಎಂದು ನಮಗೆ ಟಾಂಗ್ ನೀಡುತ್ತಿದ್ದರು.
ಇಸ್ಮಾಯಿಲ್ ಸರ್ ಗಾಂಧಿಯಂತೆ,ಸಂತನಂತೆ, ಆಧ್ಯಾತ್ಮಿಕ ಚಿಂತಕನಂತೆ ಸರಳವಾಗಿ ಬದುಕಿದರು. ಸನ್ಮಾನಗಳಿಂದ ಅವರೆಂದೂ ಬಹುದೂರು. ಅವರ ಸುತ್ತ ಏನೂ ಅಲ್ಲದವರೂ ಸನ್ಮಾನ, ಪ್ರಶಸ್ತಿಗಳಿಂದ ವಿಜೃಂಬಿಸುತ್ತಿದ್ದರೆ, ಗೋನಾಳ್ ಸರ್, ನಾಟಕದ ಕಾಲ್ ಕರ್ಟನ್ ವೇಳೆ ಸಂಗೀತ ಸಂಯೋಜಕರು ಅವರ ಹೆಸರನ್ನೂ ಕರೆದರೂ ವೇದಿಕೆಗೆ ಬರಲು ತೀವ್ರ ಮುಜುಗರ ಪಡುತ್ತಿದ್ದರು. ಶಿಷ್ಯರಾದ ನಮ್ಮ ಕೆಲವು ಸ್ನೇತರು ಅವರಿಗೆ ಸಣ್ಣದಾಗಿ ಸನ್ಮಾನಿಸುವುದಾಗಿ ಹೇಳಿದಾಗ ಅವರು ‘ಸಾಧ್ಯವೇ ಇಲ್ಲ. ನೀವಾರು ನನಗೆ ಸನ್ಮಾನ ಮಾಡಲು.. ಯಾರಾದರೂ ನೋಡಿದರೆ ಕಾಸು ಕೊಟ್ಟು ಸನ್ಮಾನ ಮಾಡಿಸಿಕೊಂಡಿದ್ದಾನೆ ಅಂದುಕೊಳ್ಳುವುದಿಲ್ಲವೇ’ ಎಂದು ಭಯಪಡುತ್ತಿದ್ದರು. ಪ್ರಶಸ್ತಿಗಾಗಿ ವಸೂಲಿ ಬಾಜಿ ಮಾಡುವ, ಬೀದಿಗಳಲ್ಲಿ ಪ್ರಶಸ್ತಿಗಳು ಮಾರಾಟವಾಗುತ್ತಿರುವ ಸಂದರ್ಭದಲ್ಲಿ ಗೋನಾಳ ಮುಜುಗರ ಎಷ್ಟೊಂದು ಆರೋಗ್ಯಕರವಾದದ್ದು ಅಲ್ಲವೇ?
ಬಿವಿ ಕಾರಂತರ ನಂತರ ರಂಗ ಸಂಗೀತವನ್ನು ಶ್ರೀಮಂತಗೊಳಿಸಿದ ಕೀರ್ತಿ ಇಸ್ಮಾಯಿಲ್ ಗೋನಾಳ್ ಸರ್ ಗೆ ಸಲ್ಲಬೇಕು. ಕನ್ನಡ ರಂಗಭೂಮಿ ಇನ್ನಷ್ಟು ಚಲನಶೀಲವಾಗಿದ್ದರೆ ಗೋನಾಳರ ಸಂಗೀತದ ಮಹತ್ವ ಅರಿತು ಅವರಲ್ಲಿನ ಸಂಗೀತ ಪ್ರತಿಭೆಯನ್ನು ಬಳಸಿಕೊಳ್ಳುತ್ತಿತ್ತು. ಆದರೆ ಕಳೆದ 2 ದಶಕಗಳಿಂದ ರಂಗಭೂಮಿಯೇ ಸೊರಗುತ್ತಿರುವ ರಂಗ ತಜ್ಞರಿಗೆ ಗೋನಾಳ್ ಅವರಲ್ಲಿನ ಸಂಗೀತ ಪ್ರತಿಭೆ ಕಾಣುವ ಕಣ್ಣು ಎಲ್ಲಿಂದ ಬರಬೇಕು ಹೇಳಿ.
ನನ್ನ ಐದರಿಂದ ಆರು ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಗೋನಾಳ್ ಸರ್ ಇದ್ದರೆ, ಒಂದು ಬಲ ಮತ್ತು ನೆಮ್ಮದಿ.. ಹೇಳಿದ ಟೈಮ್ ಗೆ ಪಕ್ಕಾ ಹಾಜರ್, ನಾಟಕ ಮಾಡಿಸುವ ಕಾಲೇಜಿನ ವಿದ್ಯಾರ್ಥಿಗಳಿಗಳಲ್ಲೇ ಕೆಲವರಿಗೆ ಸ್ವರ ತಾಳ ಹೇಳಿಕೊಟ್ಟು ತಯಾರು ಮಾಡುವ ಪೂರ್ವ ಸಿದ್ದತೆ, ಅವರಿಗೆ ತರಬೇತಿ ನೀಡಿ ಹಾಡಿಸುವ ಮೂಲಕ ಪ್ರೋತ್ಸಾಹ. ಸಂಗೀತದ ಸ್ಕ್ರಿಪ್ಟನ್ನೂ ಸ್ವತಃ ಬರೆದುಕೊಳ್ಳುತ್ತಿದ್ದರು. ಅದನ್ನು ನೋಡಿಕೊಂಡು ಯಾರು ಬೇಕಾದರೂ ಅವರ ಕಲ್ಪನೆಯಂತೆ ಸಂಗೀತ ಸಂಯೋಜಿಸಹುದಿತ್ತು.
ಆಶ್ರಮದಲ್ಲಿ ಕುಳಿತಿದ್ದ ಎಷುನ್ನಾಗೆ ಒಂದು ದಿನ ಇದ್ದಕ್ಕಿದ್ದಂತೆ ತಾನು ಬದುಕಿದ್ದು ಸಾಕು ಎನಿಸಿತು. ಶಿಷ್ಯರಿಗೆ ಸೌಧೆಗಳನ್ನು ಕೂಡಿ ಹಾಕಲು ಹೇಳಿದಳು. ಆ ಸೌಧೆಯ ಮೇಲೆ ಹೋಗಿ ಕುಳಿತು ಬೆಂಕಿ ಹಚ್ಚುವಂತೆ ಸೂಚಿಸಿದಳು. ಬೆಂಕಿ ಹತ್ತಿ ಉರಿಯುತ್ತಿದ್ದಂತೆ ಶಿಷ್ಯನೊಬ್ಬ ದೂರದಿಂದ ಕೂಗಿ ಹೇಳಿದ ‘ನಿನಗೆ ಬೆಂಕಿಯ ಉರಿ ತಾಗುತ್ತಿಲ್ಲವೇ’ ಎಂದು. ಅದಕ್ಕೆ ಎಷುನ್ನಾ ಮೌನವಾಗಿ ಹೇಳಿದಳು ‘ನಿನ್ನಂಥಾ ಮೂರ್ಖರಿಗೆ ಇಂಥಾ ಪ್ರಶ್ನೆಗಳೇ ಹೊಳೆಯುವುದು’ ಎಂದು

ಗೋನಾಳ್ ಸರ್ ಕೂಡ ಝೆನ್ ಗುರುವಿನಂತೆ ಬದುಕು ಮುಗಿಸಿ ಹೋಗಿದ್ದಾರೆ. ಹೀಗೆ ಹೋಗಿ ನಮ್ಮೊಳಗೆ ಅವರು ಶಾಶ್ವತವಾಗಿ ಉಳಿದುಬಿಟ್ಟಿದ್ದಾರೆ. 

ಗೋವಿಂದರಾಜ ಬೈಚಗುಪ್ಪೆ,
ಪತ್ರಕರ್ತ, ರಂಗ ನಿರ್ದೇಶಕ

ಗೋವಿಂದರಾಜ ಬೈಚಗುಪ್ಪೆ... ಬರೆಯುತ್ತಾರೆ, "ಝೆನ್ ಗುರುವಿನಂತೆ ಬದುಕಿದ ಗೋನಾಳ್ ಸರ್"

ಝೆನ್ ಗುರು ಎಷುನ್ನಾ ಕುಳಿತಿದ್ದಾಳೆ. ಅವರಲ್ಲಿಗೆ ಒಬ್ಬ ಯುವಕ ಶಿಷ್ಯತ್ವ ಸ್ವೀಕರಿಸಲು ಬರುತ್ತಾನೆ. ಆಶ್ರಮದಲ್ಲಿ ಊಟ ಮಾಡಿ ಗುರುವಿನ ಬಳಿ ಬಂದು ತಾನು ಬಂದ ಉದ್ದೇಶವನ...