ಬುಧವಾರ, ಜುಲೈ 31, 2013

"ಮಬ್ಬುಗತ್ತಲು"



ಅವಳನೊಮ್ಮೆ ಅಪ್ಪಿಕೊಳ್ಳಬೇಕಾಗಿತ್ತು... ಅವಳನೊಮ್ಮೆ ಅಪ್ಪಿಕೊಳ್ಳಬೇಕಾಗಿತ್ತು ಎಂದು ಅನಿಸಿದ್ದು ಅವಳಿಂದ ಒಂದಷ್ಟು ದೂರವಾದ ಬಂದ ಮೇಲೆ. ಅವಳ ಮುಖವಂತು ನನಗೆ  ಖಂಡಿತಾ ನೆನಪಿಲ್ಲ, ಕಾರಣ ಅದು 'ಮಬ್ಬುಗತ್ತಲು' ಆದರೆ ಅವಳು ಕೇಳಿದ ಮಾತುಗಳು ಮಾತ್ರ ನನಗೆ ಸ್ಪಷ್ಟವಾಗಿ ನೆನಪಿದೆ.
ಹಲೋ.. ಬರ್ತಿರಾ...
ನನ್ನದೆ ಲೋಕದಲ್ಲಿ ಯೋಚಿಸುತ್ತಾ ರಸ್ತೆಯ ಮೇಲೆ ನಡೆದುಹೋಗುತ್ತಿದ್ದ ನಾನು ಚಣ ಬೆಚ್ಚಿದವನಂತೆ ಅತ್ತ ನೋಡಿ ನಿಂತು ಕೊಂಡಾಗ; ಕತ್ತಲಲ್ಲಿ ನಿಂತಿದ್ದ ಆಕೆ ಕ್ಷಣಾರ್ಧದಲ್ಲಿ ನನ್ನ ಹತ್ತಿರಕ್ಕೆ ಬಂದು ನಗುಮುಖದಿಂದ ಎಷ್ಟು ಕೊಡ್ತಿರಾ...? ಎಂದು ಕೇಳಿದಾಗ ನಾನು ಒಮ್ಮೆಲೆ ಗಾಬರಿಯಾಗಿ ಏನು ಮಾತಾಡಲು ತೋಚದೆ ಎಷ್ಟು ಕೊಡಬೇಕು ಎಂದು ಕೇಳಿಬಟ್ಟೆನಾದರು ನಂತರ ನನಗೆ ಯಾಕೋ ತಳಮಳ ಶುರುವಾಯಿತು. ನಿಂತುಕೊಳ್ಳಲೇ ಇಲ್ಲ ಸರಸರ ನಡೆಯಲು ಪ್ರಾರಂಭಿಸಿದೆ.ಆಕೆ ಆಕರ್ಷಕವಾಗಿ ಸೀರೆ ತೊಟ್ಟಿದ್ದಾಳೆ ಅನ್ನುವುದು ಮಾತ್ರ ನನ್ನ ಮನಸಿನೊಳಗೆ ಪ್ರತಿಬಿಂಬಿಸುತ್ತಿದೆ.
ಹಲೋ... ಬನ್ನಿ
ಎಷ್ಟು ಕೊಡ್ತಿರಾ... ಬನ್ನಿ ಹೋಗಬೇಡಿ
ಹಲೋ... ಒಂದು ಮಾತೇಳಿ.. ಎಷ್ಟು ಕೋಡ್ತಿರಾ....
ಯಾಕ್ ಹಾಂಗ್ ಹೋಗ್ತಿದ್ದಿರಾ...? ಬನ್ನಿ ಎಂದು ನನ್ನ ಹಿಂಬಾಲಿಸಲು ಶುರು ಮಾಡಿದಳು. ನಾನು ಓಡಿ ಬಂದು ಬಸ್ಸು ಹತ್ತಿಕೊಂಡುಬಿಟ್ಟೆ ಯಾಕೋ ಗೊತ್ತಿಲ್ಲ ನನ್ನ ಹೃದಯ ಬಡಿತ ನಿಲ್ಲುತ್ತಲೇ ಇಲ್ಲ. ಅವಳು ಕೇಳಿದ ಮಾತುಗಳು ನನ್ನೊಳಗೆ ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಿವೆ. ನನ್ನ ಬಗ್ಗೆ ನನಗೇ ಹೇಸಿಗೆ ಅನಿಸುತ್ತಿದೆ. ನನ್ನ ಭಯವನ್ನು ಕಂಡು ನನಗೆ ನಾಚಿಕೆಯಾಗಿದೆ. ನಾನು ಅವಳನ್ನು ಕಂಡು ಯಾಕೆ ಅಷ್ಟು ತಳಮಳಕ್ಕೊಳಗಾದೆ...? ನಾ ಅವಳನ್ನೊಮ್ಮೆ ಮಾತಾಡಿಸಬಹುದಿತ್ತಲ್ಲ. ಆಕೆ ನನ್ನನ್ನು ಬಾ  ಕೇಳಿದ ಮಾತ್ರಕ್ಕೆ ಪ್ರಳಯವೇ ಸಂಭವಿಸಿಬಿಡುತ್ತಿತ್ತೆ, ಅಥವಾ ಆಕೆ ನನ್ನ ತಿಂದು ಬಿಡುತ್ತಿದ್ದಳೆ, ಆಕೆಯು ಮನುಷ್ಯಳಲ್ಲವೆ, ಆತ್ಮೀಯವಾಗಿ ಅವಳ ವೈಯಕ್ತಿಕ ಬದುಕಿನ ಬಗ್ಗೆ ಕೇಳಬಹುದಿತ್ತಲ್ಲ,  ಆಕೆಯನ್ನು ಪರಿಚಯಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತಲ್ಲವೆ? ಎಂದೆಲ್ಲಾ ಏನೇನೋ ನನ್ನೊಳಗೆ ನಾನೆ ಅಂದುಕೊಳ್ಳುತ್ತ ಹಾಸ್ಟೆಲ್ ರೂಂ ಸೇರಿದಾಗ ಸಮಯ ರಾತ್ರಿ ಸುಮಾರು ಹನ್ನೊಂದುವರೆ ಆಗಿರಬಹುದು. ಅಂತು ಮಲಗುವ ಸಾಹಸಕ್ಕೆ ಪ್ರಯತ್ನಿಸಿದೆನಾದರೂ ನಿದ್ದೆ ಬರುವುದು ಮಾತ್ರ ಬಹಳ ದೂರು ಇದೆ. ಕಂಬಳಿ  ಹೊದ್ದು ಗಟ್ಟಿಯಾಗಿ ಕಣ್ಮುಚ್ಚಿಕೊಂಡರು ನಿದ್ರೆಯ ಸುಳಿವೇ ಇಲ್ಲ. ಸರಿ ಎಂದು ಹಾಗೆ ಕತ್ತಲನ್ನು ಕಣ್ತುಂಬಿಕೊಳ್ಳುತ್ತಾ ಏನಾಯಿತು ನನ್ನ ಮನಸ್ಸಿಗೆ ಎಂದು ನನ್ನ ಹುಚ್ಚುತನವನ್ನು ನಾನೇ ಬೈದುಕೊಂಡೆ. ಹೊರಗೆ ಬಂದು ಕತ್ತಲ ಆಕಾಶವನ್ನೊಮ್ಮೆ ವೀಕ್ಷಿಸಿದೆ. ಮತ್ತೆ ಬಂದು ಚಾಪೆಯ ಮೇಲೆ ಸುಮ್ಮನೆ ಮಲಗಿಕೊಂಡೆ.  ದೇಹಮಲಗಿಕೊಂಡರೂ ಮನಸ್ಸು ಯೋಚಿಸುತ್ತಲೇ ಇತ್ತು ಕೆಲವು ದಿನಗಳ ಹಿಂದೆ ಸೆಕೆಂಡ್ ಶಿಪ್ಟ್ ಕೆಲಸ ಮುಗಿಸಿಕೊಂಡು 11 ಗಂಟೆ ಸುಮಾರಿಗೆ ಮೆಜಸ್ಟಿಕ್ನ ಕೆ.ಜಿ ರಸ್ತೆಯಲ್ಲಿ ನಡೆದು ಬರುತ್ತಿರಬೇಕಾದರೆ ನಾನು ಸೆಕ್ಸ್ ವರ್ಕಸ್ ನ ಮಾತನಾಡಿಸಿದುದು ನೆನಪಾಯಿತು. ಆಕೆಗೆ ಸುಮಾರು ಮುವತ್ತೈದು ವರ್ಷ ವಯಸ್ಸಿರಬಹುದು. ಗೋಡೆ ಪಕ್ಕ ಸೇವೆಗಾಗಿ ನಿಂತಿದ್ದಾಳೆ. ನಾನು ಹತ್ತಿರಕ್ಕೆ ಹೋಗಿ ಮಾತನಾಡಿಸಿದಾಗ ನಾನು ಗಿರಾಕಿ ಎಂದು ತಿಳಿದು ಬನ್ನಿ ಬನ್ನಿ.... ಎಂದು ಆಕೆಯೇ ನನ್ನ ಹತ್ತಿರಕ್ಕೆ ಕರೆದುಕೊಂಡಳು.. ನಾನು ಆವೇಶಕ್ಕೆ ಒಳಗಾಗದೆ; ನಿಮ್ಮ ಬಗ್ಗೆ ಒಂದಷ್ಟು ಕತೆನೋ ಕಾದಂಬರಿಯೋ ಬರೆಯಬೇಕೆಂದಿದ್ದೇನೆ. ನಿಮ್ಮಿಂದ ಒಂದಷ್ಟು ಮಾಹಿತಿ ಬೇಕಾಗಿತ್ತು..... ಎಂದೆ. ಅದಕ್ಕೆ ತುಂಬಾ ನಿರಾಸೆಗೊಂಡವಳಂತೆ ಪಕ್ಕದಲ್ಲಿ ನಿಂತಿದ್ದ ಯುವತಿಯ ಕಡೆ ಕೈತೋರಿತಸಿ; ಆಕೆ ಅಲ್ಲೆ ಅವಳನ್ನೆ ನೋಡುತ್ತಾ ನಿಂತಿದ್ದ ಪುರುಷನ ಬಳಿಹೋಗಿ ವ್ಯಾಪಾರ ಕುದುರಿಸುವುದರಲ್ಲಿ ನಿರತಳಾಗಿಬಿಟ್ಟಳು. ಯುವತಿಯೇನೋ ಪ್ರೀತಿಯಿಂದಲೇ ಮಾತನಾಡಿಸಿ ನಮ್ಮದೇ ಒಂದು ಗುಂಪು ಇದೆ, ಅದು ಮೈಸೂರು ರಸ್ತೆಯಲ್ಲಿದೆ; ಅಲ್ಲಿಗೆ ಬನ್ನಿ ಮಾತಾಡುತ್ತೇವೆ. ಎಂದು ಹೇಳಿ ಆಕೆಯು ಮೌನವಾದಳು - ನಾನು ಇದೆ ಸಮಯವೆಂದು ತಿಳಿದು ಏನಾದರೂ ಮಾಡಿ ಅವರ ವೈಯಕ್ತಿಕ ವಿಚಾರಗಳೊಂದಿಷ್ಟು ಕಲೆ ಹಾಕಬೇಕೆಂದು ಅವಸರವಸರವಾಗಿ ಒಂದಷ್ಟು ಪ್ರಶ್ನೆಗಳನ್ನು ಮನಸ್ಸಿನಲ್ಲೇ ಸಿದ್ಧಪಡಿಸಿಕೊಂಡು ನಿಮ್ಮಲ್ಲಿ ಎಷ್ಟು ಜನಾ ಇದ್ದಿರಿ ಮೇಡಂ? ಎಂದೆ. ಅದಲ್ಲ ಇವಾಗ ಹೇಳಕ್ಕೆ ಆಗಲ್ಲ  ನಮ್ಮ ಆಫೀಸಿಗೆ ಬನ್ನಿ ಅಲ್ಲೇ ಎಲ್ಲಾ ಮಾಹಿತಿ ಸಿಗುತ್ತೆ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದರು. ಸರಿ ಎಂದು ಅಲ್ಲೇ ರಸ್ತೆಯ ಬದಿಯಲ್ಲೇ ತಿಂಡಿ ತಿಂದು ರಾತ್ರಿ ಪಾಳಿ ಬಸ್ಸಿನಲ್ಲಿ ಡಬಲ್ ಚಾರ್ಚ್ ಕೊಟ್ಟು ಮನೆ ಸೇರಿದಾಗ ಸಮಯ ಸುಮಾರು ಹನ್ನೆರಡುವರೆ  ಆಗಿತ್ತು. ಮನಸ್ಸಿನಲ್ಲಿ ಮಾತ್ರ ಸಾವಿರಾರು ಪ್ರಶ್ನೆಗಳು ಯಾವುದೋ ಪುಸ್ತಕದ ಒಂದೆರಡು ಪುಟಗಳನ್ನು ತಿರುವಿಹಾಕಿ ಹಾಗೆ, ನಿದ್ರೆಗೆ ಜಾರಿದ್ದೇನೆ ಎಂದು ಗೊತ್ತಾಗಿದ್ದು ಬೆಳಿಗ್ಗೆ 6 ಗಂಟೆಗೆ ಆಲರಾಂ ಕಿರುಚಿಕೊಂಡಾಗಲೇ. ಅದೇ ವಾರದಲ್ಲಿ ಮತ್ತೊಂದು ಘಟನೆ ನನ್ನು ಕಣ್ಮುಂದೆಯೇ ನಡೆದುಹೋಯ್ತು. ಅದು ಮೆಜೆಸ್ಟಿಕ್ನ ಸಂಘ ಥಿಯೇಟರ್ ಬಳಿ ನಾನು ರಸ್ತೆ ದಾಟಿ ಬಸ್ಸ್ಸ್ಟಾಂಡಿಗೆ ತಲುಪುವ ಸಲುವಾಗಿ ರಸ್ತೆಬದಿ ನಿಂತು ರಸ್ತೆಯಲ್ಲಿ ವಾಹನಗಳು ಖಾಲಿಯಾಗಲಿ ಎಂದು ಕಾಯುತ್ತಿದ್ದೆ. ನಾನು ಬರಬೇಕಾದರೆ ಅದೇ ರಸ್ತೆಯಲ್ಲಿ ಇಬ್ಬರು ಮೂವರು ಸೇವಕಿಯರು ಉತ್ತರ ಕರ್ನಾಟಕದ ಯುವಕರ ಜೊತೆ ವ್ಯಾಪಾರ ಕುದುರಿಸುತ್ತಿದ್ದರು. ಯುವಕರು ಕಟ್ಟಡ ಕಾರ್ಮಿಕರೆಂಬುದು ಅವರನ್ನು ನೋಡುತ್ತಲೇ ಹೇಳಬಹುದು. ಇದ್ದಕ್ಕಿದ್ದಂತೆ ವಿಥೌಟ್ ಡ್ರೆಸ್ನಲ್ಲಿ ಬಂದ ಪೋಲಿಸ್ ಪೇದೆಗಳು ಯುವತಿಯರನ್ನು ದನಕ್ಕೆ ಬಡಿಯುವ ಹಾಗೆ ಬಡಿಯುತ್ತಾ ಅಟ್ಟಿಸಿಕೊಂಡು ಬರುತ್ತಿದ್ದುದ ಕಂಡು ನಾನು ರಸ್ತೆ ದಾಟುವುದನ್ನೇ ಬಿಟ್ಟು ಒಂದೆರಡು ನಿಮಿಷ ಅವರ ನಾಟಕವನ್ನು ವೀಕ್ಷಿಸುತ್ತಿದ್ದೆ. ಆದರೆ ಏಟು ತಿಂದ ಯುವತಿಯರು ಸತ್ತೆವೋ, ಬದುಕಿದೆವೋ ಎಂಬಂತೆ ಓಡುತ್ತಾ ಯಾವ್ಯಾವುದೋ ಸಂದಿಗಳಿಗೆ ನುಗ್ಗಿದರು. ಪೋಲಿಸನ ಹೊಡೆತದ ರಭಸಕ್ಕೆ ಪೆಟ್ಟು ತಪ್ಪಿಸಿಕೊಳ್ಳುವ ರಭಸದಲ್ಲಿ ಅಲ್ಲೆ ಇದ್ದ ಕಂಬಕ್ಕೆ ಡಿಕ್ಕಿ ಹೊಡೆದು. ಕೆಳಗೆ ಬಿದು ಕುಂಟುತ್ತಾ ಪಕ್ಕದ ಬೀದಿಗೆ ಪರಾರಿಯಾದ ಸೇವಕಿಯ ನೆನಪು ಮಾತ್ರ ನನ್ನ ನಿದ್ದೆ ಕೆಡಿಸಿತ್ತು. ರಾತ್ರಿ ಸಮಯ ಮೂರು ಗಂಟೆಯಾಗಿದೆ. ನನಗೆ ನಿದ್ದೆ ಮಾತ್ರ ಬರುತ್ತಿಲ್ಲ ಸಂಜೆ  ಮಾಡಿದ್ದ ಟೀ ಇದೆ. ಅದನ್ನೆ ಬಿಸಿ ಮಾಡಿ ಕುಡಿದೆ ಲೈಟ್ ಆಪ್ ಮಾಡಿ ಕತ್ತಲಲ್ಲಿ ಕುರ್ಚಿಯ ಮೇಲೆ ಕೂತು ಯೋಚಿಸಲು ಶುರು ಮಾಡಿದೆ.ಯಾಕೆ...? ಪೋಲಿಸಿನವರು ಅವರನ್ನು ಹಾಗೆ ದನಕ್ಕೆ ಬಡಿದಂಗೆ ಬಡಿಯುತ್ತಾರೆ. ಅವರಿಗೆ ಸಮಾಜದಲ್ಲಿ ಅವರಂತೆ ಬದುಕುವ ಹಕ್ಕಿಲ್ಲವೆ? ಅದು ಅವರ ವೃತ್ತಿ ಅದನ್ನೇಕೆ ಇವರು ತಪ್ಪು ಎನ್ನುತ್ತಾರೆ....? ಸಮಾಜದಲ್ಲಿ ಎಷ್ಟೋ ಕಾನೂನು ಬಾಹಿರವಾದ ವಿಷಯಗಳು ನಡೆಯುತ್ತಿದ್ದರೆ ಪ್ರಭುತ್ವ ನೋಡಿಯೂ ನೋಡದಂತೆ ನಟಿಸುವಾಗ ಸೆಕ್ಸ್ ಮಾಡುವುದು ಕಾನೂನು ಬಾಹಿರವೇ?
ಹೋಟೆಲ್ ಗಳು ಆಹಾರ ಪೂರೈಸುತ್ತವೆ. ಹಸಿವಾದವನು ಹೋಟಲ್ಗೆ ಹೋಗಿ ಊಟಮಾಡಿ ತನ್ನ ಹಸಿವು ನೀಗಿಸಿಕೊಳ್ಳುತ್ತಾನೆ. ಹಾಗೆಯೆ ದೇಹಕ್ಕೆ ಆಹಾರ ಎಷ್ಟು ಅವಶ್ಯಕವೋ... ಸೆಕ್ಸ್ ಕೂಡ ಅಷ್ಟೇ ಅವಶ್ಯಕವಾದುದಲ್ಲವೆ. ಸೆಕ್ಸ್ ವರ್ಕಸ್ ಕೂಡ ಹಾಗೆ ಮನುಷ್ಯನ ಬಹುದೊಡ್ಡ ಅವಶ್ಯಕತೆಯನ್ನು ಪೂರೈಸುತ್ತಿದ್ದಾರೆ. ಅನ್ನುವ ಸಾಮಾನ್ಯ ಜ್ಞಾನವೂ ಇಲ್ಲದ ನನ್ನ ಮಕ್ಕಳ್ನ ಅದೇನ್ ತಗೊಂಡು ಹೊಡಿಯಬೇಕೋ ಗೊತ್ತಾಗುತ್ತಿಲ್ಲ ಎಂದು ಡೈರೆಕ್ಟರ್ ಶ್ರೀನಿವಾಸ ಕಾಫಿ ಕುಡಿಯುತ್ತ ಅಂದ ಮಾತು ಸತ್ಯ ಅನಿಸಿತು. ಘಟನೆ ನಡೆದ ಒಂದೆರಡು ದಿನಕ್ಕೆ  ಅದೇ ರಸ್ತೆಯಲ್ಲಿನ ಪುಟ್ಪಾತ್ ಮೇಲೆ ಚಪ್ಪಲಿ ಹೊಲೆಯುವ ಅಜ್ಜನ ಬಳಿ ವಿಷಯವನ್ನು ಪ್ರಸ್ತಾಪಿಸಿದಾಗ ಆತ ಹೇಳಿದ ಸತ್ಯ ಕಥೆ ಹೀಗಿತ್ತು.... ಪೋಲಿಸಿನವರು ಪ್ರತಿದಿನ ಹೆಂಗಸರ ಬಳಿ ಇಷ್ಟು ಅಂತ ಕಮೀಷನ್ ಪಡೆಯುತ್ತಾರೆ ವ್ಯಾಪಾರವಿಲ್ಲದ ಹೆಂಗಸರು ಮಾಮೂಲಿ ಕೊಡಲು ನೋವುಗಳನ್ನು ಹೇಳಿಕೊಳ್ಳುತ್ತಾರೆ. ಆಗ ಇದೇ ರೀತಿ ಹೊಡೆದು ಓಡಿಸುತ್ತಾರೆ. ಮತ್ತೆ ಇಲ್ಲಿರುವ ಪೇದೆಗಳಿಗಿಂತ ಮೇಲಾಧಿಕಾರಿಗಳು ಬಂದಾಗ ಅವರ ಮುಂದೆ ಪ್ರಾಮಾಣಿಕವಾಗಿ ಕೆಲಸಮಾಡುತ್ತಿದ್ದೇವೆ ಎನ್ನುವುದನ್ನು ತೋರಿಕೊಳ್ಳಲು ಹೀಗೆ ಮಾಡುತ್ತಾರೆ. ಇವೆಲ್ಲವು ಮಾಮೂಲಿ ದಿನಾ ನಡೆಯುತ್ತಲೆ ಇರುತ್ತವೆ. ನೋಡಿ... ನೋಡಿ... ಸಹಜ ಅನ್ನಿಸಿದೆ.
ಹೀಗೆ ಏಟುಗಳು ತಿಂದ ಹೆಣ್ಣಮಕ್ಕಳು ನಾಳೆ ಬರ್ತಾರೆ ನನ್ನ ಬಳಿ ತನ್ನ ನೋವುಗಳನ್ನೆಲ್ಲ ಹೇಳ್ತಾರೆ. ಗಾಯಗಳನ್ನು ತೋರಿಸ್ತಾರೆ. ನಾವೇನು ಮಾಡಲಿ ಕೆಲಸ ಬಿಟ್ಟು ಬಿಡಿ ಅಂದರೂ, ಅವರಿಗೆ ಕೆಲಸ ಒಗ್ಗಿ ಹೋಗಿದೆ ಅಂತಾರೆ. ನಾನೆನು ಮಾಡಲಿ ಎಂದು ಯಜಮಾನ್ರು ಹೇಳಿದಾಗ ನನಗು ಹೌದಲ್ಲವೆ.... ಇವರಿಗೆ ಯಾಕೆ ಇಷ್ಟೊಂದು ರಿಸ್ಕು ಇವರು ವೃತ್ತಿಯನ್ನು ಬಿಟ್ಟು ಬೇರೆ ಏನಾದರು ಮಾಡಬಹುದಲ್ವ ಅನ್ನಿಸಿ ಯಜಮಾನ್ರ ಬಳಿ ಅವರೊಟ್ಟಿಗೆ ಒಮ್ಮೆ ಮಾತಡಬೇಕಲ್ಲ ಅಂದಾಗ ಅದಕ್ಕೇನಂತೆ ಮಾತಾಡುವಂತೆ ಬಿಡುವು ಮಾಡಿಕೊಂಡು ಬಾ.... ಅಂದಿದ್ದರು ಸರಿ ಯಾವ್ಯಾವುದೋ ಒತ್ತಡಗಳ ಮಧ್ಯೆ ಅವರನ್ನು ಭೇಟಿಮಾಡಲು ಸಾಧ್ಯವಾಗಲಿಲ್ಲ. ಇದಾದ ಕೆಲವು ದಿನಗಳ  ನಂತರ ನನ್ನ ಎನ್.ಜಿ.ಓ ಸ್ನೇಹಿತರೊಬ್ಬರು ಕರೆ ಮಾಡಿ ಒಂದು ಕಾರ್ಯಕ್ರಮವಿದೆ. ನೀವು ಖಂಡಿತಾ ಬರಬೇಕು ಅಂದರು. ನಾನು ಏನಾದರು ಸಬೂಬು ಹೇಳಿ ತಪ್ಪಿಸಿಕೊಂಡು ಬಿಡುವ ಎಂದುಕೊಳ್ಳುತ್ತಿರುವಾಗಲೇ ನೀವು ತುಂಬಾ ದಿನಗಳಿಂದ ಭೇಟಿ ಮಾಡಬೇಕು ಅಂದುಕೊಂಡಿದ್ದರಲ್ಲ, commaricial Sex workers ಅವರದೇ ಒಂದು ಸಂಘ ಇದೆ. ಅವರೇ ಅವರ ಸಮಸ್ಯೆಗಳ ಕುರಿತ, ಪೋಲಿಸ್ ದೌರ್ಜನ್ಯಗಳ ಕುರಿತು, ಅವರ ಅನುಭವಗಳನ್ನು ನೇರವಾಗಿ ಕೇಳುವ ಅವಕಾಶವಿದೆ ಬನ್ನಿ ಎಂದರು. ಮಾರನೆ ದಿನ ತಡಮಾಡದೆ ಸಿಟಿ ಮಾರ್ಕೆಟ್ ಬಸ್ ಹತ್ತಿ ಅಲ್ಲಿಗೆ ತಲುಪಿದಾಗ ಕಾರ್ಯಕ್ರಮ ಪ್ರಾರಂಭವಾಗಿಬಿಟ್ಟಿತ್ತು. ಕಾರ್ಯಕ್ರಮದ ವೇದಿಕೆಯ ಮೇಲೆ ದಲಿತ ಸಂಘರ್ಷ ಸಮಿತಿಯ ದಲಿನಾಯಕರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸೆಕ್ಸ್ ವರ್ಕರ್ಸ್ಗೆ ಉಚಿತ ಕಾನೂನು ಸಹಾಯ ಮಾಡುವ ವಕೀಲರು ಬಂದಿದ್ದಾರೆ. ಕಾರ್ಯಕ್ರಮದಲ್ಲಿ ಸಮಾರು ಇನ್ನೂರ ಐವತ್ತಕ್ಕೂ ಹೆಚ್ಚು ಸೇವಕಿಯರು ಪಾಲ್ಗೊಂಡು ಸರದಿಯ ಪ್ರಕಾರ ಕೆಲವರು ವೇದಿಕೆಯ ಮೇಲೆ ತಮ್ಮ ವೈಯಕ್ತಿಕ ನೋವುಗಳನ್ನು, ತಮ್ಮ ಮೇಲಾದ ದೌರ್ಜನ್ಯಗಳನ್ನು, ತಾವು ಕೂಪಕ್ಕೆ ಬರಲು ಕಾರಣವೇನು ಮುಂತಾದ ತಮ್ಮ ಬದುಕಿನ ಚಿತ್ರಣಗಳನ್ನೆಲ್ಲ ತೆರೆದಿಡುತ್ತಿದ್ದಾರೆ. ಕೆಲವರು ಮಾತಾಡುವಾಗ ಗದ್ಗದಿತರಾಗಿ ಮಾತನಾಡಲಾಗದೆ ಅಳುತ್ತಾರೆ. ಅಲ್ಲಿರುವ ಎಲ್ಲ ಸೇವಕಿಯರು ಕೆಲಸಕ್ಕೆ ಇಷ್ಟಪಟ್ಟೇನು ಬಂದವರಲ್ಲ ಯಾವ್ಯಾವುದೋ ದುರಂತಗಳ ಮಧ್ಯೆ ಆಕಸ್ಮಿಕವಾಗಿ ವೃತ್ತಿಗೆ ಬಂದವರೆ. ಆದರೆ ಇಂದು ಅದೇ ವೃತ್ತಿಯನ್ನು ಅನಿವಾರ್ಯವಾಗಿ ಇಷ್ಟಪಟ್ಟು ಮಾಡಬೇಕಾಗಿದೆ ಎಂಬ ಅವರ ಮಾತುಗಳು ಎಂತವರನ್ನು ಮುಟ್ಟುತ್ತವೆ.
ಅಲ್ಲಿ ಸೇರಿರುವವರು ತೊಂಬತ್ತು ಭಾಗ ಅನಕ್ಷರಸ್ಥರು ಮತ್ತು ಸ್ಲಂಗಳಲ್ಲಿ ಬದುಕುವವರೆ ಅದರಲ್ಲೂ ಹೆಚ್ಚು ಕೆಳಜಾತಿಗೆ ಸೇರಿದವರು. ಗುಂಪಿನಲ್ಲಿ ಅಲ್ಪ ಸ್ವಲ್ಪ ಓದಿದವರು ಇದ್ದಾರೆ. ಓದು ತಿಳಿದಿರುವ ಸೇವಕಿರಯರು ಕಾರ್ಯಕ್ರಮ ನಿರೂಪಿಸುವುದು ಹಾಡುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಮಿಕ್ಕವರೆಲ್ಲ ವೇದಿಕೆಯ ಮೇಲೆ ಹೇಳುತ್ತಿರುವವರ ಎಲ್ಲ ನೋವುಗಳು ನಮ್ಮ ನೋವುಗಳೇ ಎಂದುಕೊಳ್ಳುತ್ತಾ ತಮ್ಮ ಸೆರಗಿನಲ್ಲಿ ಕಣ್ಣೊರಿಸಿಕೊಳ್ಳುತ್ತಾ ಮೌನವಾಗಿ ಕೂತಿದ್ದಾರೆ.ಅವರಲ್ಲಿ ನನ್ನ ಎಡಭಾಗದಲ್ಲಿ ಕೂತಿದ್ದ ಸೇವಕಿಯ ಗುಂಪಿನಲ್ಲಿ ನನ್ನ ಪಕ್ಕದಲ್ಲೇ ಕೂತಿರುವ ಒಬ್ಬ ಸೇವಕಿಯ ಮುಖ ಅರ್ಧಸುಟ್ಟು ಹೋಗಿದೆ. ಒಂದು ಕಣ್ಣು ಇಲ್ಲ. ಗಾಯದ ಗುರುತನ್ನು ನೋಡಿದರೇನೆ ಹೇಳಬಹುದು. ಅದು ಆ್ಯಸಿಡ್ನಿಂದ ಸುಟ್ಟ ಗಾಯವೆಂದು; ಆಕೆಯ ಮುಖ ಸುಟ್ಟುಹೋಗಲು ಕಾರಣವೇನೆಂದು ಕೇಳೋಣ ಅನ್ನುವಷ್ಟರಲ್ಲಿ ಅಡ್ವಕೇಟ್ ಮೇಡಂ ಮಾತನಾಡುಲು ಶುರುಮಾಡಿದರು. ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ ಪುರುಷರು. ಅದರಲ್ಲೂ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ನಿಮ್ಮ ಬಳಿಗೆ ಬಂದವರನ್ನು ಎಂದಾದರೂ ನನ್ನನ್ನು ಹೆಂಡತಿಯನ್ನಾಗಿ ಸ್ವೀಕರಿಸು ಎಂದು ಕೇಳೀದ್ದೀರಾ ? ಇಲ್ಲಾತಾನೆ... ಭೋಗಿಸಲು ಮಾತ್ರ ಬೇಕಿರುವ ನಿಮ್ಮನ್ನು ಅನಂತರ ನೋಡುವ ದೃಷ್ಟಿ ಮಾತ್ರ ಯಾಕೆ ಕೆಟ್ಟದ್ದು ಸೂಳೆಯರು, ಬೀದಿಹೋಕ ಹೆಂಡಿರು ಎಂದೇಕೆ ಕರೆಯುತ್ತಾರೆ ಎಂದಾಗ ಎಲ್ಲರು ಮೌನ......! ವ್ಯವಸ್ಥೆಯ ಕುರುಡುತನವನ್ನು, ಕ್ರೂರತನವನ್ನು ಆರ್ಥ ಮಾಡಿಕೊಳ್ಳಬೇಕು. ಎಂದು ಕಾನೂನಿನ ವೈಪಲ್ಯತೆಗಳ ಕುರಿತು ಅವರು ಮಾತನಾಡಿದರು.
ಇತ್ತೀಚೆಗೆ ಅದೇ ಸೇವಕಿಯನ್ನು (ಕಣ್ಣು, ಮುಖ ಸುಟ್ಟಿಹೋಗಿರುವ) ಸೇವಕಿಯನ್ನು ಸಿಟಿ ಮಾರ್ಕೆಟ್ಟಿನಲ್ಲಿ ಬಿರ್ಜ್ ಕೆಳಗೆ ಅವರ ಇಬ್ಬರು ಮೂವರು ಸಹುದ್ಯೋಗಿಗಳೊಂದಿಗೆ, ಊಟ ಮಾಡುತ್ತಿದ್ದುದು ನೋಡಿದೆ. ಆಕೆಯನ್ನು ಅವರ ಗೆಳತಿಯರನ್ನು ನೋಡಿದಾಕ್ಷಣ ಮನಸ್ಸು ಏನನ್ನೋ ಯೋಚಿಸುತ್ತಿದೆ. ಎಂಥಾ ಕಷ್ಟದ ಸಮಯದಲ್ಲೂ ಹಂಚಿಕೊಂಡು ತಿನ್ನುತ್ತಾರೆ. ಬೀದಿಯಲ್ಲಿ ಸಿಕ್ಕ ಯ್ಯಾರ್ಯಾರದೋ ಮಕ್ಕಳಿಗೆ, ತಾಯಂದಿರಾಗುತ್ತಾರೆ.ಯಾವ ಜಾತಿ, ಧರ್ಮಗಳು ಇಲ್ಲದೆ ಸಮಾಜ ತಿರಸ್ಕರಿಸಿದ ಜನರನ್ನು ಬಂಧುಗಳೆಂದು ಭಾವಿಸಿ ಬದುಕುತ್ತಾರೆ. ಇಂಥ ವಿಶಾಲ ಹೃದಯವಿರುವ ಇವರನ್ನೇಕೆ ಸಮಾಜ ಓರೆಗಣ್ಣಿನಿಂದ ನೋಡುತ್ತೆ, ಹೊರಗಿಟ್ಟಿದೆ ಅನ್ನುವ ಎಷ್ಟೋ ಪ್ರಶ್ನೆಗಳ ಮಧ್ಯೆ ಅಂದು ರಾತ್ರಿ ನನ್ನ ಮಾತನಾಡಿಸಿದ ಆಕೆ ಗುಂಪಿನವರಲ್ಲೇ ಯಾರೋ ಒಬ್ಬರು ಇರಬಹುದಲ್ಲವೆ ಅನ್ನಿಸಿತು. ಆದರೆ ಆಕೆ ಹೀಗ ಎಲ್ಲಿದ್ದಾಳೋ.....ಯಾರ ಸುಖಕ್ಕಾಗಿ ಯಾವ ರಸ್ತೆಯ ಬದಿ ನಿಂತಿದ್ದಾಳೋ..... ಹೇಳುವವರುಯಾರು.?


ಕಾಮೆಂಟ್‌ಗಳಿಲ್ಲ:

ಗೋವಿಂದರಾಜ ಬೈಚಗುಪ್ಪೆ... ಬರೆಯುತ್ತಾರೆ, "ಝೆನ್ ಗುರುವಿನಂತೆ ಬದುಕಿದ ಗೋನಾಳ್ ಸರ್"

ಝೆನ್ ಗುರು ಎಷುನ್ನಾ ಕುಳಿತಿದ್ದಾಳೆ. ಅವರಲ್ಲಿಗೆ ಒಬ್ಬ ಯುವಕ ಶಿಷ್ಯತ್ವ ಸ್ವೀಕರಿಸಲು ಬರುತ್ತಾನೆ. ಆಶ್ರಮದಲ್ಲಿ ಊಟ ಮಾಡಿ ಗುರುವಿನ ಬಳಿ ಬಂದು ತಾನು ಬಂದ ಉದ್ದೇಶವನ...